ತಾತ್ಯಾ ಟೋಪಿ
1813-1859. ಭಾರತವನ್ನಾಳುತ್ತಿದ್ದ ಬ್ರಿಟಿಷ್ ಸರ್ಕಾರದ ವಿರುದ್ಧ 1857 ರಲ್ಲಿ ನಡೆದ ಬಂಡಾಯದಲ್ಲಿ ಪ್ರಮುಖ ಪಾತ್ರವಹಿಸಿದ ದೇಶೀ ಸೇನಾನಿ. ಈತನ ನಿಜನಾಮ ರಾಮಚಂದ್ರ. ಪುಣೆಯ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಸುಮಾರು 1813 ರಲ್ಲಿ ಜನಿಸಿದ. ಈತನ ತಂದೆ ಪಾಂಡುರಂಗರಾವ್ ಟೋಪಿ. ಪೇಶ್ವೆ ಬಾಜಿರಾಯನ ಆಸ್ಥಾನದಲ್ಲಿದ್ದ. ಬಾಜಿರಾಯನ ದತ್ತುಪುತ್ರ ನಾನಾಸಾಹೇಬನ ಜೊತೆ ತಾತ್ಯಾನಿಗೆ ಸ್ನೇಹ ಬೆಳೆಯಿತು. ಬಾಜಿರಾಯನ ಮರಣಾನಂತರ ನಾನಾಸಾಹೇಬನಿಗೆ ಬ್ರಿಟಿಷರಿಂದ ಮಾನ್ಯತೆ ಸಿಗಲಿಲ್ಲ. ನಾನಾಸಾಹೇಬ ಬ್ರಿಟಿಷರ ದ್ವೇಷಿಯಾದ. ಇದೇ ರೀತಿ ಅತೃಪ್ತರಾದ ಜನರನ್ನು ಸೇರಿಸಿ ಬ್ರಿಟಿಷರ ವಿರುದ್ಧ ಬಂಡಾಯ ಹೂಡಲು ನಾನಾಸಾಹೇಬ ಸಂಚು ನಡೆಸಿದ. ಈ ಕಾರ್ಯದಲ್ಲಿ ತಾತ್ಯಾನದೇ ಮುಖ್ಯ ಪಾತ್ರವಾಯಿತು. 1857 ರ ಮೇಯಲ್ಲಿ 20,000 ಬಂಡು ಸೈನಿಕರನ್ನು ಸೇರಿಸಿಕೊಂಡು ತಾನೇ ಅದರ ಮುಂದಾಳಾಗಿ ಕಾನ್ಪುರದಲ್ಲಿ ತಳವೂರಿದ್ದ ಈಸ್ಟ್ ಇಂಡಿಯ ಕಂಪನಿಯ ಸೈನ್ಯವನ್ನು ಇವನು ಸೋಲಿಸಿದ. ಆದರೆ ಮತ್ತೆ ಬಲು ಬೇಗ ಈತ ಕಾನ್ಪುರದಲ್ಲಿ ಬ್ರಿಟಿಷರಿಂದ ಸೋತ. ಅನಂತರ ಇವನು ಝಾಂಸಿಯ ರಾಣಿ ಲಕ್ಷ್ಮೀಬಾಯಿಯನ್ನು ಕೂಡಿಕೊಂಡು ಬ್ರಿಟಿಷರ ವಿರುದ್ಧ ಸೈನಿಕ ಕಾರ್ಯಾಚರಣೆಗಳಲ್ಲಿ ತೊಡಗಿದ. ಝಾಂಸಿಯನ್ನು ಕಳೆದುಕೊಂಡ ರಾಣಿ ಲಕ್ಷ್ಮೀಬಾಯಿಯ ಜೊತೆ ಗೂಡಿ ಗ್ವಾಲಿಯರಿನ ಮೇಲೆ ದಾಳಿ ಮಾಡಿ ಅಲ್ಲಿಯ ರಾಜ ಸಿಂಧೆಯನ್ನು ಆಗ್ರದ ಕಡೆಗೆ ಓಡಿಸಿದ. ಗ್ವಾಲಿಯರಿನ ಸೈನಿಕರು ತಾತ್ಯಾನ ಪಕ್ಷ ಸೇರಿದರು. ಅಲ್ಲಿ ನಾನಾಸಾಹೇಬನನ್ನು ಇವನು ಪೇಶ್ವೆಯೆಂದು ಘೋಷಿಸಿದಲ್ಲದೆ, ಮರಾಠರು ಇಂಗ್ಲಿಷರ ವಿರುದ್ಧ ಬಂಡೇಳುವಂತೆ ಮಾಡುವುದಾಗಿ ಬೆದರಿಕೆ ಹಾಕಿದ. ಪ್ರಬಲವಾಗುತ್ತಿದ್ದ ತಾತ್ಯಾನನ್ನು ಹತ್ತಿಕ್ಕಲು ನೇಮಕಗೊಂಡ ಸರ್ ಹ್ಯೂ ರೋಸ್ ತಾತ್ಯಾನನ್ನು ಸೋಲಿಸಿ ಗ್ವಾಲಿಯರನ್ನು ವಶಪಡಿಸಿಕೊಂಡ (ಜೂನ್ 1858). ಈ ಯುದ್ಧದಲ್ಲಿ ರಾಣಿ ಲಕ್ಷ್ಮೀಬಾಯಿ ತೀರಿಕೊಂಡಳು. ಅನಂತರದ ಅನೇಕ ಕದನಗಳಲ್ಲಿ ತಾತ್ಯಾ ಸೋಲುತ್ತ ಬಂದರೂ ಬ್ರಿಟಿಷರಿಗೆ ಶರಣಾಗಲಿಲ್ಲ.						(ಎಸ್.ಎಂ.ಎಸ್.)

ಗೆರಿಲ ಯುದ್ಧದಲ್ಲಿ ತಾತ್ಯಾನದು ಅಸಾಧಾರಣ ಸಾಮಥ್ರ್ಯ. ಗ್ವಾಲಿಯರ್ ಸೋಲಿನ ಅನಂತರ ತಾತ್ಯಾ ಬ್ರಿಟಿಷರ ವಿರುದ್ಧ ಗೆರಿಲ ಯುದ್ಧಗಳಲ್ಲಿ ತೊಡಗಿದ. ಮಧ್ಯಭಾರತ, ಮಾಳವ, ಬುಂದೇಲಖಂಡ, ವಿಂಧ್ಯ, ಅರಾವಳಿ_ ಈ ವಿಸ್ತಾರವಾದ ಪ್ರದೇಶದಲ್ಲಿ ಈತ ಬ್ರಿಟಿಷರಿಗೆ ಕಿರುಕುಳ ಕೊಡುತ್ತಿದ್ದ. ಮಿಂಚಿನ ವೇಗದಿಂದ ಈತ ಚಲಿಸುತ್ತಿದ್ದ. ಈತನನ್ನು ಸೆರೆಹಿಡಿಯಲು 1858 ರ ಜೂನ್ ನಿಂದ 1859 ರ ಏಪ್ರಿಲ್ ವರೆಗೆ ಭಾರತದಲ್ಲಿದ್ದ ಬ್ರಿಟಿಷ್ ಸೈನ್ಯದ ಸುಮಾರು ಅರ್ಧಭಾಗ ಸತತವಾಗಿ ಪ್ರಯತ್ನಿಸಿತು. ಸು. 2,800 ಮೈಲಿಗಳಷ್ಟು ದೂರ ಈತನನ್ನು ಬೆಟ್ಟ ಕಾಡುಗಳಲ್ಲಿ ಸತತವಾಗಿ ಬೆನ್ನಟ್ಟಲಾಯಿತು. ಆದರೂ ಹಿಡಿಯಲಾಗಲಿಲ್ಲ. ತಾತ್ಯಾ ಕೊನೆಗೆ ಸಿಂಧೆಯ ಸಾಮಂತನಾಗಿದ್ದ ಮಾನಸಿಂಗನ ದ್ರೋಹದಿಂದಾಗಿ 1859ರ ಏಪ್ರಿಲ್ 8 ರಂದು ಬ್ರಿಟಿಷರಿಗೆ ಸೆರೆಸಿಕ್ಕಿದ. ದೇಶದ್ರೋಹದ ಅಪಾದನೆ ಹೊರಿಸಿ ಬ್ರಿಟಿಷ್ ನ್ಯಾಯಾಲಯ ಈತನನ್ನು ಏಪ್ರಿಲ್ 18ರಂದು ಗಲ್ಲಿಗೇರಿಸಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ